ನೂತನ್
	(1936-91)-. ಹಿಂದೀ ಚಿತ್ರರಂಗದ ನಟಿ. ನಲವತ್ತರ ದಶಕದಲ್ಲಿ ಖ್ಯಾತನಟಿಯಾಗಿದ್ದ ಶೋಭನಾ ಸಮರ್ಥ (ಪ್ರಕಾಶ ಸಂಸ್ಥೆಯ ರಾಮರಾಜ್ಯ ಚಿತ್ರದ ಸೀತೆ ಯ ಪಾತ್ರಾಧಾರಿಣಿ)ಳ ಮಗಳು. ಮಹಾರಾಷ್ಟ್ರದವರು. ಉಲ್ಲಾಸಗೊಳಿಸುವ ಮುಗ್ಧಸೌಂದರ್ಯಗಾತಿಯಾದ ಈಕೆ 1946ರಲ್ಲಿ ಮಿಸ್ ಇಚಿಡಿಯಾ ಕಿರೀಟಧಾರಣೆ. ಮಾಡಿಸಿಕೊಂಡಳು. ತಾಯಿಯ ಪ್ರಭಾವದಿಂದ ಅನೇಕ ಚಿತ್ರಗಳಲ್ಲಿ ಬಾಲಪಾತ್ರಗಳಲ್ಲಿ ಕಾಣಿಸಿಕೊಂಡಳು. ಮೋತಿಲಾಲರಂಥ ಸಿದ್ಧಹಸ್ತರ ತರಬೇತಿಯೂ ದೊರಕಿತು. ಅನೇಕ ಲಲಿತಕಲೆಗಳಲ್ಲಿ ಹಾಗೂ ಭಾಷೆಗಳಲ್ಲಿ ಪರಿಣತಿ ಪಡೆದಿದ್ದ ಇವರಿಗೆ ಅಭಿನಯ ಕರತಲಾಮಲಕ. ಹಮಾರಿ ಬೇಟಿ (1950) ಚಿತ್ರದ ಮೂಲಕ ತೆರೆಗೆ ಪ್ರವೇಶಿಸಿದಾಗ ಈಕೆಯ ವಯಸ್ಸು ಹದಿನಾಲ್ಕು. ಅಂದಿನಿಂದ ದುನಿಯಾದಾರಿ (1977) ವರೆಗೆ ಇಪ್ಪತ್ತೆಂಟು ವರ್ಷಗಳ ಕಾಲ ತನ್ನ ಸೂಕ್ಷ್ಮಸಂವೇದನೆ ಹಾಗೂ ಭಾವಾತ್ಮಕ ಅಭಿನಯ ಸಾಮಥ್ರ್ಯದಿಂದ ಭಾರತೀಯ ತೆರೆಯ ಮೇಲೆ ತನ್ನ ಸ್ಥಾನವನ್ನು ಈಕೆ ಭದ್ರವಾಗಿ ಉಳಿಸಿಕೊಂಡಿದ್ದಾಳೆ. ಐವತ್ತರ ದಶಕದ ಆರಂಭದಲ್ಲಿ ನಾಸೀರ್ ಖಾನ್, ಆ ದಶಕದ ಕೊನೆಯಲ್ಲಿ ದೇವಾನಂದ್, ಅರವತ್ತರ ದಶಕದಲ್ಲಿ ಸುನೀಲ್‍ದತ್ ಹಾಗೂ ಅಶೋಕ್ ಕುಮಾರ್ ಮೊದಲದವರ ಜೊತೆ ಅಭಿನಯಿಸಿದ್ದಾರೆ. ಬಾಲರಾಜ್ ಸಹಾನಿಯೊಂದಿಗೆ ನಟಿಸುತ್ತಿದ್ದ ಇವರು ಇಂದು ಅವರ ಮಗ ಪರೀಕ್ಷಿತ್ ಸಹಾನಿಯೊಂದಿಗೆ ಅಭಿನಯಿಸಿದರು. ಆರಂಭ ದಿನಗಳಲ್ಲಿ ಇವರ ಚಿತ್ರಗಳಾದ ಪಂಚೋಲಿಯವರ ನಗೀನಾ (1951) ಹಘೂ ಗೋಪ್‍ರವರ ಮಾಲ್ಕಿನ್ (1953) ಯಶಗಳಿಸಿದವು. ರಣಜಿತ್ ಅವರ ಹಂಲೋಗ್ (1951) ಚಿತ್ರದಲ್ಲಿ ಕ್ಷಯಪೀಡಿತ ಕೃಶಕಾಯದ ಹುಡುಗಿಯಾಗಿ ಕಾಣಿಸಿಕೊಂಡರು. ಇವರ ಅಭಿನಯ ಕೌಶಲ್ಯ ಪ್ರೇಕ್ಷಕರ ಮನಸ್ಸಿನಲ್ಲಿ ಬೇರುಬಿಟ್ಟಿತು. ಹಂಗಾಮ (1952) ಮತ್ತು ಮಾಲ್ಕಿನ್ (1953) ಚಿತ್ರಗಳಲ್ಲಿ ಆಗಿನ ಹಾಸ್ಯಚಕ್ರವರ್ತಿ ಗೋಪ್ ಹಾಗೂ ಖ್ಯಾತ ಕಲಾವಿದ ಯಾಕೂಬ್ ಅವರ ಜೊತೆ ಹೊಯ್‍ಕೈಯಾಗಿ ನಟಿಸಿ, ತೆಳುಹಾಸ್ಯಲೇಪವುಳ್ಳ ಪಾತ್ರಗಳನ್ನೂ ನಿರ್ವಹಿಸಬಲ್ಲೆ ಎನ್ನುವುದನ್ನು ಪ್ರದರ್ಶಿಸಿದರು. ಅಮರಪ್ರೇಮಿಯಾಗಿ ಲೈಲಾಮಜ್ನುವಿನಲ್ಲಿ (1953), ನಿಧಾನ ನಡಿಗೆಯ ರಾಜಕುಮಾರಿಯಾಗಿ ಶಬಾಬ್‍ನಲ್ಲಿ (1954), ಪಂಜಾಬಿ ಮಹಾಕಾವ್ಯ ಹೀರ್ ರಂಜಾ ಆಧಾರಿತ ಹೀರ್‍ನಲ್ಲಿ ಐತಿಹ್ಯವಾಗಿ ನಿಂತ ಪ್ರೇಮಪಾತ್ರಗಳಲ್ಲಿ ಕಾಣಿಸಿಕೊಂಡರು. ಅಮೀಯ ಚಕ್ರವರ್ತಿಯವರ ಸೀಮಾದಲ್ಲಿ (1955) ಕ್ರೂರಜಗತ್ತಿನ ಪಾಲಾದ ಅನಾಥ ಹೆಣ್ಣೊಬ್ಬಳ ಪಾತ್ರವನ್ನು ಅನುಭವಿಸಿ ಅಭಿವ್ಯಕ್ತಿಸಿ ತನ್ನ ಅಭಿನಯದ ಮತ್ತೊಂದು ಆಯಾಮಕ್ಕೆ ಕಾಲಿಟ್ಟರು. ಈ ಚಿತ್ರದಿಂದ ಶ್ರೇಷ್ಠ ನಟಿ ಎಂಬ ಖ್ಯಾತಿಗಳಿಸಿದಳು ಮಾತ್ರವಲ್ಲ, ತಾರಾಪಟ್ಟವೂ ಇವರದಾಯಿತು. ಭಾರತದ ಪ್ರತಿಷ್ಠಿತ ಫಿಲ್ಮ್‍ಫೇರ್ ಪ್ರಶಸ್ತಿಯನ್ನು ಶ್ರೇಷ್ಠ ಅಭಿನಯಕ್ಕಾಗಿ ಐದು ಬಾರಿ-ಸೀಮಾ (1955), ಸುಜಾತ (1959), ಬಂಧಿನಿ (1963) ಹಾಗೂ ಮಿಲನ್ (1967) -ಮೈ ತುಲಸಿ ತೇರೆ ಆಂರ್ಗಕಿ (1978) ಪಡೆದರು. ಮೇರಿ ಜುಗ್ ಜವುಕ್ಕೆ 1978ರಲ್ಲಿ ಪೋಷಕ ಪಾತ್ರಕ್ಕೆ ಫಿಲಂಫೇರ್ ಪ್ರಶಸ್ತಿ ಲಭ್ಯವಾಗಿದೆ.

	ಭಾರತೀಯ ಸ್ತ್ರೀ ಪ್ರತೀಕವಾದ ಪಾತ್ರಗಳನ್ನಷ್ಟೇ ಈಕೆ ನಿರ್ವಹಿಸಲಿಲ್ಲ, ಪರಿವರ್ತನೆಯ ಘಟ್ಟದಲ್ಲಿನ ಭಾರತೀಯ ಮಹಿಳೆಯಾಗಿ ಇವರು ತೆರೆಯ ಮೇಲೆ ಕಾಣಿಸಿಕೊಂಡರು. ಮುಗ್ಧಸೌಂದರ್ಯದ ಜೊತೆಗೆ ಅಪ್ಯಾಯಮಾನ ರೋಚಕ ಕಂಠದ ಇವರು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆತ್ಮಪ್ರತ್ಯಯದ ಎದೆಗಾರಿಕೆಯ ಹೆಣ್ಣಾಗಿ ನೇಷ, ಸೋನಿ ಕಿ ಚಿಡಿಯಾ, ಬಂಧಿನಿ ಹಾಗೂ ಸೌದಾಘರ್ (1972) ನಲ್ಲಿ, ಅಸ್ಪøಶ್ಯ ಹೆಣ್ಣಿನ ಸ್ಮರಣೀಯ ಪಾತ್ರಗಳಲ್ಲಿ ಸ್ಮಜಾತ ಹಾಗೂ ಲೈಟ್ ಹೌಸ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಡಿವಂತಿಕೆಯ ತೆರೆಯ ಮೇಲೆ ಪ್ರಥಮ ಬಾರಿಗೆ ತಾರೆಯೊಬ್ಬಳು ಆಂಶಿಕವಾಗಿ ನಗ್ನಳಾಗಿ ಕಾಣಿಸಿಕೊಳ್ಳುವ ಬಾರಿಷ್ (1957), ಸಾಂಪ್ರದಾಯಿಕ ಹುಸಿ ಪ್ರತಿಷ್ಠೆಯನ್ನು ಬಿಟ್ಟು ಹೆಣ್ಣನ್ನು ಹೆಚ್ಚು ಲೌಕಿಕವಾಗಿಸುವ ಪೇಯಿಂಗ್ ಗೆಸ್ಟ್ (1957), ಆಗಿನ ಕಾಲಕ್ಕೆ ಸ್ವಲ್ಪ ಹೆಚ್ಚು ಎನ್ನಬಹುದಾದ ಪ್ರಣಯದೃಶ್ಯಗಳಿರುವ ಮಂಜಿಲ್ (1960) ಹಾಗೂ ತೇರೆ ಘರ್ ಕೆ ಸಾಮ್ನೆ (1963) ಚಿತ್ರಗಳ ನಾಯಕಿ ಇವರು; ಈ ನಾಲ್ಕು ಚಿತ್ರಗಳಲ್ಲಿ ಇವರ ಜೊತೆಗೆ ನಾಯಕನಾಗಿ ಅಭಿನಯಿಸಿದವರು ದೇವಾನಂದ್.

	ದಕ್ಷಿಣ ಭಾರತ ಚಿತ್ರೋದ್ಯಮಿಗಳು ಹಿಂದೀ ಚಿತ್ರಗಳನ್ನು ತಯಾರಿಸಲು ಆರಂಭಿಸಿದ ಮೇಲೆ ಆ ಚಿತ್ರಗಳ ಸಿಂಹಪಾಲು ಇವರದು. 1965ರಿಂದ ನಾಲ್ಕು ವರ್ಷಗಳ ಕಾಲ ದಕ್ಷಿಣದಲ್ಲಿ ನಿರ್ಮಾಣವಾದ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದರು. ಖಾನ್‍ದಾನ್ (1965), ಮಿಲನ್ (1967), ಮೆಹರ್ ಬಾನ್ (1967), ಗೌರಿ (1968), ಭಾಯಿ ಬಹೆನ್ (1969), ದೇವಿ, ಛೋಟಾಭಾಯಿ, ಮೇರೆ ಮುನ್ನ, ಮಾ ಔರ್ ಮಮ್ತಾ ಇತ್ಯಾದಿ ಚಿತ್ರಗಳು ಬಂದುದು ಆ ಕಾಲದಲ್ಲಿಯೇ. ಬಹುತೇಕ ಇವು ಕೌಟುಂಬಿಕ ಚಿತ್ರಗಳು. ಮತ್ತೆ ಮುಂಬಯಿಗೆ ಮರಳಿ ಸರಸ್ವತಿ ಚಂದ್ರದಲ್ಲಿ (1968) ಅಭಿನಯಿಸಿ ತನ್ನ ಕಲಾಪ್ರತಿಭೆ ಅಚ್ಚಳಿಯದೆ ಇನ್ನೂ ಇದೆ ಎಂದು ಸಾದರಪಡಿಸಿದರು ಮುಂದಿನ ಮೂರು ವರ್ಷಕಾಲ ಇವರಿಗೆ ತಕ್ಕ ಪಾತ್ರಗಳು ಬರಲಿಲ್ಲ. ಅನಂತರ ಅನ್ಮರಾಗ್ (1972), ಸೌದಾಗರ್ (1972), ಗ್ರಹಣ್ (1973), ಜಾಗೃತಿ (1977), ಮತ್ತು ದುನಿಯಾದಾರಿ (1977) ಚಿತ್ರಗಳಲ್ಲಿ ಆಳ ಮನಃಸಂಘರ್ಷಗಳಿಗೆ ತುತ್ತಾದ ಪ್ರೌಢ ಸ್ತ್ರೀಯಾಗಿ ನಟಿಸಿದ್ದಾರೆ. ಇವರ ಇತರ ಪ್ರಮುಖ ಚಿತ್ರಗಳೆಂದರೆ ನಿರ್ಮೋಹಿ (1940), ಆಖ್ರಿ ದಾವ್, ಅನಾಡಿ, ದಿಲ್ಲಿ ಕ ಥಗ್ (1958), ಸೂರತ್ ಔರ್ ಸೀರತ್ (1962) ಕರ್ಮ (1986) ಕಾನೂನ್ ಅಪನಾ (1989) ಇತ್ಯಾದಿ.

	ವಿವಾಹಿತಳಾಗಿರುವ ಈಕೆಯ ಪತಿ ರಜನೀಶ್ ಬೆಹ್ಲ್ ನೌಕಾದಳದಲ್ಲಿ ಅಧಿಕಾರಿ. ಈಕೆಯ ತಂಗಿ ತನುಜಾಳೂ ಹಿಂದೀ ಚಲನಚಿತ್ರ ಹಾಗೂ ಕಿರುತೆರೆಯ ತಾರೆ ಪುತ್ರ ಮೊನಿಷ್ ಬೆಹ್ಲ ಕೂಡ ಚಿತ್ರರಂಗದಲ್ಲಿ ಇದ್ದಾರೆ.		 (ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ